ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆ, ಬೆಳಗಾವಿ

ಪರಿಚಯ

ಕರ್ನಾಟಕ ರಾಜ್ಯವು ದೇಶದ ಕಬ್ಬು ಉತ್ಪಾದನೆಯಲ್ಲಿ ಮೂರನೇ ಹಾಗೂ ಸಕ್ಕರೆ ಇಳುವರಿಯಲ್ಲಿ ಎರಡನೇಯ ಸ್ಥಾನ ಹೊಂದಿದ್ದು, ರಾಜ್ಯವು ಕಬ್ಬು ಬೆಳೆಗೆ ಪೂರಕವಾದ ಮಣ್ಣಿನ ಗುಣಲಕ್ಷಣಗಳು ಹಾಗೂ ಹವಾಮಾನವನ್ನು ಹೊಂದಿದ್ದು ಕಬ್ಬು ಉತ್ಪಾದನೆ ಹಾಗೂ ಸಕ್ಕರೆ ಇಳುವರಿ ಅಧಿಕವಿರುತ್ತದೆ. ರಾಜ್ಯದಲ್ಲಿ ಕಳೆದ 5 ವರ್ಷಗಳಲ್ಲಿ ಸಕ್ಕರೆ ಉದ್ದಿಮೆ ಹಾಗೂ ಕಬ್ಬು ಬೆಳೆಯುವ ಪ್ರದೇಶ ಸಕಾರಾತ್ಮಕವಾಗಿ ಅಭಿವೃದ್ಧಿ ಹೊಂದಿರುತ್ತದೆ. ಸಕ್ಕರೆ ಉದ್ದಿಮೆಯ ಬೆಳವಣಿಗೆ ಹಾಗೂ ಕಬ್ಬು ಬೆಳೆಯ ನಿರ್ವಹಣೆಗಾಗಿ ಸಂಶೋಧನೆ ಹಾಗೂ ಅಭಿವೃದ್ಧಿಯಿಂದ ಕೂಡಿದ ಹೊಸ ಅವಿಷ್ಕಾರಗಳು ಅವಶ್ಯವಿರುತ್ತದೆ. ಇವೆಲ್ಲ ಉದ್ದೇಶಗಳನ್ನು ಗಮನದಲ್ಲಿಟ್ಟುಕೊಂಡು ಸಕ್ಕರೆ ಉದ್ಯಮ ಹಾಗೂ ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ಸಂಶೋಧನಾ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ದಿನಾಂಕ: 02-11-1988 ರಂದು ಕರ್ನಾಟಕ ಸಕ್ಕರೆ ಸಂಸ್ಥೆ, ಬೆಳಗಾವಿಯನ್ನು ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ, 1960 ಇದರ ಅಡಿಯಲ್ಲಿ ರಾಷ್ಟ್ರೀಯ ಸಕ್ಕರೆ ಸಂಸ್ಥೆ, ಕಾನ್ಪುರ ಮತ್ತು ವಸಂತದಾದಾ ಸಕ್ಕರೆ ಸಂಸ್ಥೆ, ಪುಣೆ ಮಾದರಿಯಲ್ಲಿ ಸ್ಥಾಪಿಸಲ್ಪಟ್ಟಿರುತ್ತದೆ.

ಸಕ್ಕರೆ ಉದ್ದಿಮೆ ಹಾಗೂ ಕಬ್ಬು ಬೆಳೆಗಾರರ ಅಭಿವೃದ್ಧಿಗಾಗಿ ಸನ್ 2003 ರಲ್ಲಿ ಸಂಸ್ಥೆಯನ್ನು ಬೆಳಗಾವಿಯಲ್ಲಿ ಸ್ಥಾಪಿಸಲಾಯಿತು. ಪೂರ್ವ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪನವರ ಸ್ಮರಣಾರ್ಥ ಸನ್ 2010 ರಲ್ಲಿ ಸಂಸ್ಥೆಯ ಹೆಸರನ್ನು “ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ” ಎಂದು ಮರು ನಾಮಕರಣ ಮಾಡಲಾಯಿತು. ಸಂಸ್ಥೆಯ ಕಾರ್ಯವ್ಯಾಪ್ತಿಯು ಸರ್.ಎಂ.ವಿಶ್ವೇಶ್ವರಯ್ಯಾ ಸಕ್ಕರೆ ಸಂಶೋಧನಾ ಸಂಸ್ಥೆ, ಮಂಡ್ಯ ಸ್ಥಾಪನೆಯಾದ ನಂತರ ಬೆಳಗಾವಿ ಹಾಗೂ ಕಲಬುರ್ಗಿ ಕಂದಾಯ ವಿಭಾಗಗಳಿಗೆ ಸೀಮಿತವಾಗಿರುತ್ತದೆ.